ಕೊಳ, ಹೊಯ್ದಾಟದ

ಒಂದು ನೀರ್ಗಾಲಿಗೆ (ಟರ್ಬೈನ್) ನೀರನ್ನು ಒಯ್ಯುವ ನಳಿಗೆಗೆ ಅಕಸ್ಮಾತ್ ಋಣ ಸಂಮರ್ದದಿಂದ ಆಗುವ ಹಾನಿಯನ್ನು ತಪ್ಪಿಸಲು ಇರುವ ಏರ್ಪಾಡು (ಸರ್ಜ್ ಟ್ಯಾಂಕ್). ಋಣ ಸಂಮರ್ದ ಎರಡು ಸಂದರ್ಭಗಳಲ್ಲಿ ತಲೆದೋರುತ್ತದೆ: ಏಕರೀತಿಯಾಗಿ ಪ್ರವಹಿಸುತ್ತಿರುವ ನೀರಿನ ಧಾರೆಯ ಹಠಾತ್ ನಿಲುಗಡೆಯಾದಾಗ; ಮತ್ತು ನೀರ್ಗಾಲಿ ಹಠಾತ್ತಾಗಿ ಪೂರ್ಣಕಾರ್ಯ ಸಾಮಥ್ರ್ಯದಿಂದ ಕಾರ್ಯೋದ್ಯುಕ್ತವಾದಾಗ, ಈ ಎರಡು ಬಗೆಯ ಒತ್ತಡಗಳಿಂದಲೂ ನಳಿಗೆಗೆ ಅಪಾಯವಿದೆ. ಇದನ್ನು ತಪ್ಪಿಸಲು ಎಲ್ಲ ಉದ್ದವಾದ ನಳಿಗೆಗಳ ಕೊನೆಗಳಲ್ಲಿಯೂ ಹೊಯ್ದಾಟದ ಕೊಳಗಳನ್ನು ಒದಗಿಸಿರುತ್ತಾರೆ. ನೀರ್ಗಾಲಿ ಮುಚ್ಚಿದಾಗ ಹೊರಗೆ ಬಂದ ನೀರೆಲ್ಲವೂ ಹೊಯ್ದಾಟದ ಕೊಳಕ್ಕೆ ಬೀಳುತ್ತದೆ; ನೀರ್ಗಾಲಿಗೆ ನೀರನ್ನು ಒಯ್ಯುವ ನಳಿಗೆಯೊಳಕ್ಕೆ ಬರುವುದಿಲ್ಲ. ನೀರ್ಗಾಲಿಯನ್ನು ತೆರೆದಾಗ ಹೊಯ್ದಾಟದ ಕೊಳವಿಯ ನೀರು ನಳಿಗೆಯೊಳಕ್ಕೆ ಬರುತ್ತದೆ. ಇದರಿಂದ ಋಣ ಒತ್ತಡ ಉತ್ಪತ್ತಿಯಾಗುವುದಿಲ್ಲ.
(ಎನ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ